ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು – ಸಂಸ್ಕೃತೋತ್ಸವ
‘ವೈಜ್ಞಾನಿಕ ತಳಹದಿಯನ್ನು ಹೊಂದಿರುವ ಸಂಸ್ಕೃತ ಭಾಷೆಯು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಸಂಸ್ಕೃತಿ ಮತ್ತು ಸಂಸ್ಕೃತ ಭಾಷೆ ನಮ್ಮ ದೇಶದ ಪ್ರತಿಷ್ಠೆ. ಸಂಸ್ಕರಿಸಲ್ಪಟ್ಟ, ಪರಿಶುದ್ಧವಾದ, ಸಮೃದ್ಧವಾದ ಭಾಷೆ ಸಂಸ್ಕೃತ. ಜ್ಞಾನದ ಎಲ್ಲಾ ಶಾಖೆಯನ್ನು ಅಭಿವ್ಯಕ್ತಿಸಲು ಬೇಕಾದ ಪೂರ್ಣ ಸಾಮರ್ಥ್ಯ ಈ ಭಾಷೆಗೆ ಇದೆ. ಈ ಭಾಷೆಯಲ್ಲಿ ಯಾವುದೇ ರೀತಿಯ ಬದಲಾವಣೆಗೆ ಅವಕಾಶವಿಲ್ಲ. ವಿದ್ಯಾರ್ಥಿಗಳು ಈ ಭಾಷೆಯನ್ನು ಸಂಶೋಧನಾ ಪ್ರವೃತ್ತಿಯಿಂದ, ಜ್ಞಾನದ ದೃಷ್ಠಿಯಿಂದ ಅಧ್ಯಯನ ಮಾಡಬೇಕು’ ಎಂದು ಶ್ರೀ ಅದಮಾರು ಮಠದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಸಂಸ್ಕೃತೋತ್ಸವ ಸಮಾರಂಭವನ್ನು ಉದ್ಘಾಟಿಸಿದ ಶ್ರೀಪಾದರು “ಪ್ರಾಚೀನ ಋಷಿಮುನಿಗಳು ಗ್ರಹಗಳ ಚಲನೆಯ ನಿಶ್ಚಿತ ಜ್ಞಾನವನ್ನು ಸಂಸ್ಕೃತ ಭಾಷೆಯಿಂದಲೇ ಕಂಡು ಕೊಂಡಿರುವರು. ದೇಶದ ಎಲ್ಲಾ ಭಾಷೆಗಳಿಗೆ ಸಂಸ್ಕೃತ ಮಾತೃಸ್ಥಾನದಲ್ಲಿದೆ” ಎಂದು ಹೇಳಿ ಆಶೀರ್ವಚಿಸಿದರು.
ಕಾರ್ಯಕ್ರಮದ ಮುಖ್ಯ ಅಭ್ಯಾಗತರಾದ ಎಸ್.ಎಂ.ಎಸ್.ಪಿ. ಸಂಸ್ಕೃತ ಮಹಾವಿದ್ಯಾಲಯದ ಪ್ರಾಧ್ಯಾಪಕ ವಿದ್ವಾನ್ ಡಾ.ಅಮೃತೇಶ ಆಚಾರ್ಯರವರು ಮಾತನಾಡುತ್ತಾ, “ಸಂಸ್ಕೃತ ಭಾಷೆಯ ವೈಶಿಷ್ಟ್ಯ ಮತ್ತು ಶಬ್ಧ ಸಮೃದ್ಧಿಯನ್ನು ಉದಾಹರಣೆಗಳ ಮೂಲಕ ನಿರೂಪಿಸಿದರು. ಸಾವಿರ ವರ್ಷಗಳ ಹಿಂದೆಯೇ ಸಂಸ್ಕೃತ ಭಾಷೆ ಭಾರತದ ಶೈಕ್ಷಣಿಕ ಮಾಧ್ಯಮ ಭಾಷೆಯಾಗಿತ್ತು. ಜನಸಾಮಾನ್ಯರ ಸಂವಹನದ ಮಾಧ್ಯಮವೂ ಆಗಿತ್ತು” ಎಂದು ಹೇಳಿದರು.
ಈ ಸಂದರ್ಭದಲ್ಲಿ ತಮ್ಮ ಕೈಯಾರೆ ತಯಾರಿಸಿದ ಸತ್ತಿಗೆಯನ್ನು ನೀಡಿದ ಖ್ಯಾತ ದೈವ ನರ್ತಕರಾದ ರವಿ ಪಾಣಾರವರನ್ನು ಸ್ವಾಮೀಜಿಯರು ಸನ್ಮಾನಿಸಿ ಆಶೀರ್ವಚಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರತಿಮಾ ಬಾಳಿಗರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿಯ ಗೌರವ ಕೋಶಾಧಿಕಾರಿ ಶ್ರೀ ಪ್ರಶಾಂತ್ ಹೊಳ್ಳ, ಪೂರ್ಣಪ್ರಜ್ಞ ಕಾಲೇಜಿನ ಪ್ರಾಚಾರ್ಯರಾದ ಡಾ.ರಾಮು ಎಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ರಮೇಶ್ ಭಾಗವಹಿಸಿದ್ದರು.
ಸಂಸ್ಕೃತ ಪ್ರಾಧ್ಯಾಪಿಕೆ ಕು.ನಿಖಿತಾ ಸ್ವಾಗತಿಸಿದರು. ವಿದ್ಯಾರ್ಥಿ ಗೌರವ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಚಿರಾಗ್ ವಂದಿಸಿದರು. ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಪುತ್ರಾಯ ಕಾರ್ಯಕ್ರಮವನ್ನು ಸಂಯೋಜಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.